ನ್ಯೂಸ್ ನಾಟೌಟ್: ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲೇ ಚೂರಿಯಿಂದ ಯುವತಿಯ ಕತ್ತು ಸೀಳಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪುತ್ತೂರು ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ಸರಪಾಡಿಯ ಪದ್ಮರಾಜ್ ಎಂದು ಗುರುತಿಸಲಾಗಿದೆ. ಬೈಕ್ ನಂಬರ್ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿದ ಚೂರಿ ಮತ್ತು ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು ಬಸ್ ನಿಲ್ದಾಣದಲ್ಲಿ ಯುವಕ ಪದ್ಮರಾಜ್ ಮತ್ತು ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಗೌರಿ(18) ಎಂಬಾಕೆಯ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಯುವತಿ ಮಹಿಳಾ ಪೊಲೀಸ್ ಠಾಣೆಯ ಬಳಿ ಬಂದಾಗ ಬೈಕ್ನಲ್ಲಿ ಬಂದ ಯುವಕ ಆಕೆಯ ಕತ್ತು ಸೀಳಿ ಪರಾರಿಯಾಗಿದ್ದ. ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ದಾರಿ ಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಗೌರಿ ಪುತ್ತೂರಿನ ವಸ್ತ್ರ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದಳು. ಗೌರಿ ಮತ್ತು ಪದ್ಮರಾಜ್ ಪರಿಚಯದವರಾಗಿದ್ದು, ಇಬ್ಬರೂ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದರು. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಇಂದು ನಡೆದ ಜಗಳ ಹಿನ್ನೆಲೆಯಲ್ಲಿ ಯುವತಿ, ಪದ್ಮರಾಜ್ ವಿರುದ್ಧ ಮಹಿಳಾ ಠಾಣೆಗೆ ದೂರು ನೀಡಲು ಮುಂದಾಗಿದ್ದಳು. ಇದಕ್ಕಾಗಿ ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿಯ ಮಹಿಳಾ ಠಾಣೆ ಬಳಿ ಬಂದಿದ್ದಳು. ಇದರಿಂದ ಕುಪಿತಗೊಂಡ ಆರೋಪಿ ಪದ್ಮರಾಜ್ ಯುವತಿಯ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ್ದಾನೆ. ಯುವತಿ ಗಂಭೀರ ಸ್ಥಿತಿಯಲ್ಲಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆಕೆಯನ್ನು ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತರುವ ದಾರಿಯಲ್ಲಿ ಮೃತಪಟ್ಟಿದ್ದಾಳೆ.
ಕೃ