ನ್ಯೂಸ್ ನಾಟೌಟ್: ಉಳ್ಳಾಲ ತೊಕ್ಕೊಟ್ಟು ಬಳಿ ನೇತ್ರಾವತಿ ನದಿ ತೀರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ರಾಜೇಶ್ ಎಂದು ಗುರುತಿಸಲಾಗಿದೆ. ಈತ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದು ಸಾಮಾಜಿಕ ಕಾರ್ಯಗಳಲ್ಲಿ ತನ್ನನು ತಾನು ತೊಡಗಿಸಿಕೊಂಡಿದ್ದ ಎನ್ನಲಾಗಿದೆ.
ಸೋಮವಾರ ಸಂಜೆ ಈತ ಕಾಸರಗೋಡಿನ ಕುಂಬಳೆಯಿಂದ ದಿಢೀರ್ ನಾಪತ್ತೆಯಾಗಿದ್ದ. ಬಂಬ್ರಾಣ ಸ್ವಾಗತ್ ಫ್ರೆಂಡ್ಸ್ ನ ಮಾಜಿ ಕಾರ್ಯದರ್ಶಿಯಾಗಿದ್ದರು. ಅಲ್ಲದೆ ಬಿಜೆಪಿ ಯುವಮೋರ್ಚಾ ಕುಂಬಳೆ ಮಂಡಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಯುವಶಕ್ತಿ ಸೇವಾ ಪಥದ ಮೂಲಕ ನೊಂದ ಹೃದಯಗಳಿಗೆ ನೆರವನ್ನು ನೀಡುವಲ್ಲಿ ಸಹಕಾರಿಯಾಗಿದ್ದರು. ಊರಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದರು. ಮೃತರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸೋಮವಾರ ಸಂಜೆ ಮನೆಯಿಂದ ಬೈಕಿನಲ್ಲಿ ತೆರಳಿದವರು ಮರಳಿ ಮನೆಗೆ ಬಾರದನ್ನು ಕಂಡು ಮನೆಯವರು ಹಾಗೂ ಗೆಳೆಯರು ಮೊಬೈಲ್ ಗೆ ಸಂಪರ್ಕಿಸಿದಾಗ ಸ್ವಿಚ್ ಆಫ್ ಆಗಿತ್ತು.
ಕೂಡಲೇ ಮನೆಯವರು ಕುಂಬಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದರು. ನಿನ್ನೆ ತೊಕ್ಕೊಟ್ಟು ನೇತ್ರಾವತಿ ನದಿ ತೀರವಾದ ಬೆಂಗರೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಪಾಂಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವೆಸ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದರು.
ಮೃತದೇಹದ ಪ್ಯಾಂಟ್ ಕಿಸೆಯಲ್ಲಿ ಲಭಿಸಿದ ಮೊಬೈಲ್ ಫೋನ್ ನ ಸಿಮ್ ನ್ನು ಬೇರೊಂದು ಮೊಬೈಲ್ ಗೆ ಇಟ್ಟಾಗ ರಾಜೇಶ್ ರ ಸಂಬಂಧಿಕರು ಕರೆ ಮಾಡಿದ್ದರು. ಕೂಡಲೇ ಪೊಲೀಸರು ಸಂಬಂಧಿಕರಿಗೆ ವಿಷಯವನ್ನು ತಿಳಿಸಿದ್ದು ಮನೆ ಮಂದಿ ಆಸ್ಪತ್ರೆಗೆ ತೆರಳಿ, ಮೃತದೇಹದ ಗುರುತು ಪತ್ತೆ ಹಚ್ಚಿದರು. ಮೃತರು ತಂದೆ, ತಾಯಿ, ಸಹೋದರ ಶುಭಂ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.