ನ್ಯೂಸ್ ನಾಟೌಟ್ : ಆದಿವಾಸಿ ಯುವಕನ ಮುಖದ ಮೇಲೆ ಮಧ್ಯಪ್ರದೇಶ ಬಿಜೆಪಿ ನಾಯಕ ಎಂದು ಹೇಳಲಾಗಿರುವ ಪ್ರವೇಶ್ ಶುಕ್ಲಾ ಎಂಬ ವ್ಯಕ್ತಿ ಮೂತ್ರ ವಿಸರ್ಜಿಸಿದ ಅಮಾನವೀಯ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಶುಕ್ಲಾನನ್ನು ಮಂಗಳವಾರ ಮಧ್ಯರಾತ್ರಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆರೋಪಿ ಶುಕ್ಲಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಲವರು ಆಗ್ರಹಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ಪ್ರವೇಶ್ ಶುಕ್ಲಾ ಎಂದು ಗುರುತಿಸಲಾದ ವ್ಯಕ್ತಿ, ನೆಲದ ಮೇಲೆ ಕುಳಿತಿರುವ ಬುಡಕಟ್ಟು ಸಮುದಾಯದ ಯುವಕನ ಮೇಲೆ ಮೂತ್ರ ವಿಸರ್ಜಿಸುತ್ತಿರುವಾಗ ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ.
ಈ ವಿಡಿಯೋ ರಾಜ್ಯದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಆರೋಪಿ ವಿರುದ್ಧ ಕಟ್ಟುನಿಟ್ಟಿನ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ.
ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿ ಆರು ದಿನಗಳ ಹಿಂದೆ ನಡೆದಿದ್ದ ಈ ಘಟನೆಯ ವಿಡಿಯೋವನ್ನು ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಬಂಧನದಿಂದ ತಪ್ಪಿಸಿಕೊಳ್ಳಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಿದ್ದ ಪ್ರವೇಶ್ ಶುಕ್ಲಾನನ್ನು ಮಧ್ಯರಾತ್ರಿ ವಶಕ್ಕೆ ಪಡೆಯಲಾಗಿದ್ದು, ಆತನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.