ನ್ಯೂಸ್ ನಾಟೌಟ್ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ, ನೀಟ್-ಯುಜಿ 2023 ಫಲಿತಾಂಶ ಜೂನ್ 13ಕ್ಕೆ ಘೋಷಣೆಯಾಗಿದೆ. ರಾಜಸ್ಥಾನದ ರಾಮ್ಲಾಲ್ನ ಯಶಸ್ಸಿನ ಕಥೆ ಬಹಳ ವಿಭಿನ್ನವಾಗಿದೆ. 11ನೇ ವಯಸ್ಸಿನಲ್ಲಿ ಒಲ್ಲದ ಮನಸ್ಸಿನಿಂದಲೇ ಬಾಲ್ಯವಿವಾಹವಾಗಿದ್ದ ರಾಮ್ಲಾಲ್, ಇನ್ನೇನು ನೀಟ್-ಯುಜಿ ಪರೀಕ್ಷೆ ಬರೆಯಬೇಕು ಎನ್ನುವ ಹಂತದಲ್ಲಿ ಮೊದಲ ಮಗುವಿಗೆ ತಂದೆಯಾಗಿದ್ದ. ಈ ವೇಳೆ ಆತನ ವಯಸ್ಸು 20 ವರ್ಷ. ಆದರೆ, ತನ್ನ ಐದನೇ ಪ್ರಯತ್ನದಲ್ಲಿ ನೀಟ್-ಯುಜಿ ಪರೀಕ್ಷೆಯಲ್ಲಿ ರಾಮ್ಲಾಲ್ ಯಶಸ್ವಿಯಾಗಿದ್ದಾರೆ.
ರಾಜಸ್ಥಾನದ ಚಿತ್ತೂರ್ಗಢ ಜಿಲ್ಲೆಯ ಘೌಸುಂದಾ ನಿವಾಸಿಯಾಗಿರುವ ರಾಮ್ಲಾಲ್, ನಾಲ್ಕು ವಿಫಲ ಯತ್ನಗಳ ಬಳಿಕ ಐದನೇ ಯತ್ನದಲ್ಲಿ ನೀಟ್-ಯುಜಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಇದರ ಬೆನ್ನಲ್ಲಿಯೇ ವೈದ್ಯನಾಗಬೇಕು ಎನ್ನುವ ಹಂಬಲವನ್ನು ರಾಮ್ಲಾಲ್ ವ್ಯಕ್ತಪಡಿಸಿದ್ದು, ತಮ್ಮ ಕುಟುಂಬದಲ್ಲಿಯೇ ಮೊದಲ ಡಾಕ್ಟರ್ ಆಗುವುದು ತಮ್ಮ ಆಸೆ ಎಂದಿದ್ದಾರೆ.
ತಮ್ಮ 11ನೇ ವಯಸ್ಸಿನಲ್ಲಿ ಒಲ್ಲದ ಮನಸ್ಸಿನಿಂದಲೇ ರಾಮ್ಲಾಲ್ ಬಾಲ್ಯವಿವಾಹವಾಗಿದ್ದರು. ಆ ವೇಳೆ ಅವರು 6ನೇ ತರಗತಿಯಲ್ಲಿ ಓದುತ್ತಿದ್ದರು. ಸಣ್ಣ ವಯಸ್ಸಿನಲ್ಲಿಯೇ ವಿವಾಹವಾಗಿದ್ದರೂ, ಬಾಳಸಂಗಾತಿಯಾಗಿ ಬಂದ ತನ್ನಷ್ಟೇ ವಯಸ್ಸಿನ ಹುಡುಗಿಗೆ ತನ್ನ ಓದುವ ಬಯಕೆಯನ್ನು ಸ್ಪಷ್ಟವಾಗಿ ತಿಳಿಸಿದ್ದರು. ಆರಂಭದಲ್ಲಿ ರಾಮ್ಲಾಲ್ನ ತಂದೆ ಇದಕ್ಕೆ ಒಪ್ಪಿರಲಿಲ್ಲ. ಆದರೆ, ದಿನ ಕಳೆದ ಹಾಗೆ ಮಗನ ಆಸೆಗೆ ಬೆಂಬಲವಾಗಿ ನಿಂತಿದ್ದರು.
ಇನ್ನೊಂದೆಡೆ ರಾಮ್ಲಾಲ್ನ ಪತ್ನಿ ಕೂಡ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಆರಂಭದಲ್ಲಿಯೇ ಆಕೆಗೂ ಕೂಡ ತನ್ನ ಪತಿ ಓದು ಮುಂದುವರಿಸುವುದು ಇಷ್ಟವಿರಲಿಲ್ಲ. ಆದರೆ, ರಾಮ್ಲಾಲ್ಗೆ ಓದುವುದರ ಬಗ್ಗೆ ಪರೀಕ್ಷೆ ಬರೆಯುವುದರ ಬಗ್ಗೆ ಇದ್ದ ಪ್ಯಾಶನ್ ಹಾಗೂ ಬದ್ಧತೆಯನ್ನು ಗಮನಿಸಿದ್ದ ಆಕೆ, ಗಂಡನ ಆಸೆಗೆ ಬೆಂಬಲ ನೀಡಲು ನಿರ್ಧಾರ ಮಾಡಿದ್ದರು. ಆ ಬಳಿಕ ಸರ್ಕಾರಿ ಶಾಲೆಯಲ್ಲಿ ತನ್ನ ಶಿಕ್ಷಣ ಪೂರೈಸಿದ ರಾಮ್ಲಾಲ್, ತಮ್ಮ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.74ರಷ್ಟು ಅಂಕ ಪಡೆದು ಪಾಸ್ ಆಗಿದ್ದರು. 11 ಹಾಗೂ 12ನೇ ತರಗತಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದ ರಾಮ್ಲಾಲ್, ಅದರೊಂದಿಗೆ ನೀಟ್-ಪಿಜಿ ಪರೀಕ್ಷೆಗೆ ಸಿದ್ಧತೆಯನ್ನೂ ಆರಂಭ ಮಾಡಿದ್ದರು.
2019ರಲ್ಲಿ 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ರಾಮ್ಲಾಲ್ ನೀಟ್-ಪಿಜಿಯ ಮೊದಲ ಪ್ರಯತ್ನ ಮಾಡಿದ್ದರು. ಮೂರನೇ ಪ್ರಯತ್ನದಲ್ಲೂ ವಿಫಲವಾದ ಬಳಿಕ ರಾಮ್ಲಾಲ್, ಕೋಟಾದಲ್ಲಿನ ಅಲ್ಲೆನ್ ಅಕಾಡೆಮಿಗೆ ಸೇರ್ಪಡೆಯಾಗಿದ್ದರು. ಅಲ್ಲಿನ ಶಿಕ್ಷಕರು ಹಾಗೂ ಅನುಭವಿಗಳ ಅಡಿಯಲ್ಲಿ ನೀಟ್-ಯುಜಿ ಪರೀಕ್ಷೆಗೆ ಸಿದ್ಧತೆಯನ್ನು ಆರಂಭ ಮಾಡಿದ್ದರು. ಈಗ ಐದನೇ ಪ್ರಯತ್ನದಲ್ಲಿ ತನ್ನ ಕನಸನ್ನು ಸಾಕಾರಗೊಳಿಸಿಗೊಂಡಿದ್ದಾರೆ.