ನ್ಯೂಸ್ ನಾಟೌಟ್ : ಕೊಡಗು ಸಂಪಾಜೆಯ ಭಾಗದಲ್ಲಿ ಸಂಭವಿಸಿರುವ ಭೀಕರ ಅಪಘಾತವು ಕಲ್ಲು ಹೃದಯವನ್ನೂ ಕರಗಿಸುವಂತ ಸನ್ನಿವೇಶವನ್ನು ನಿರ್ಮಿಸಿದೆ. ಸಂಪಾಜೆಯ ನೂರಾರು ಮಂದಿಯ ಕಣ್ಣಾಲಿಗಳನ್ನು ತೇವಗೊಳಿಸಿದೆ. ಭೀಕರ ಅಪಘಾತದಲ್ಲಿ ಪುಟ್ಟ ಮಕ್ಕಳು ಸೇರಿದಂತೆ ಆರು ಮಂದಿ ದುರಂತ ಸಾವಿಗೀಡಾಗಿದ್ದಾರೆ. ಮಗು ಸೇರಿದಂತೆ ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅಪಘಾತಕ್ಕೆ ಕಾರಣ ಏನು ಅನ್ನುವುದರ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಈ ಎಲ್ಲದರ ನಡುವೆ ಯುವಕನೊಬ್ಬ ಸಮಯ ಪ್ರಜ್ಞೆ ಮೆರೆದು ಹತ್ತು ಜನರಿಗೆ ಮಾದರಿಯಾಗಿರುವ ಅಪರೂಪದ ಘಟನೆ ನಡೆದಿದೆ.
ಹೌದು, ಬಸ್ -ಕಾರು ಅಪಘಾತಕ್ಕೆ ಈಡಾಗುವ ಕೆಲವೇ ಸೆಕೆಂಡ್ ಗಳ ಮುನ್ನ ಮಡಿಕೇರಿ ಮೂಲದ ಜುಬೈರ್ ಅನ್ನುವ ಯುವಕ ಬಸ್ ನ ಹಿಂದಿನಿಂದ ತನ್ನ ಬೈಕ್ ನಲ್ಲಿ ಬರುತ್ತಿರುತ್ತಾನೆ. ಹೀಗೆ ಬರುತ್ತಿದ್ದ ಯುವಕನ ಎದುರು ನಡೆಯಬಾರದ ದೊಡ್ಡ ದುರಂತವೊಂದು ನಡೆದೇ ಬಿಟ್ಟಿತ್ತು. ನೋಡನೋಡುತ್ತಿದ್ದಂತೆ ಬಸ್-ಕಾರು ನಡುವೆ ಭೀಕರ ಅಪಘಾತ ಸಂಭವಿಸಿಯೇ ಬಿಟ್ಟಿತ್ತು. ಕಾರಿನೊಳಗೆಲ್ಲ ರಕ್ತ ಚಿಮ್ಮಿತ್ತು. ನೋವಿನ ಚೀತ್ಕಾರ ಕೇಳಿ ಬರುತ್ತಿತ್ತು. ಊರಿನವರೆಲ್ಲ ಸೇರಿ ಅಪಾಯದಲ್ಲಿದ್ದವರನ್ನೆಲ್ಲ ಕಾರಿನಿಂದ ಎಳೆದು ಹೊರ ತರಲು ಹರಸಾಹಸ ಪಟ್ಟರು. ಈ ಹಂತದಲ್ಲಿ ಮಗುವೊಂದು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿತ್ತು. ಆಗ ಮಡಿಕೇರಿಯ ಜುಬೈರ್ ಮಗುವನ್ನು ಎತ್ತಿಕೊಂಡು ಸಹಾಯಕ್ಕಾಗಿ ಯಾಚಿಸಿದ್ದಾನೆ. ಆದರೆ ಆ ಕ್ಷಣದಲ್ಲಿ ಯಾರ ಸಹಾಯವೂ ಆತನಿಗೆ ಸಿಕ್ಕಿರಲಿಲ್ಲ. ಅಪಘಾತ ನಡೆದ ಅಣತಿ ದೂರದಲ್ಲಿದ್ದ ಸಂಪಾಜೆಯ ಗೇಟಿನ ಸಮೀಪಕ್ಕೆ ಮಗವನ್ನು ಸುಮಾರು ಇನ್ನೂರು ಮೀ. ಎತ್ತಿಕೊಂಡೇ ಬಂದು ಜುಬೈರ್ ಸಹಾಯಕ್ಕಾಗಿ ಅಂಗಲಾಚಿದ್ದಾನೆ. ಯಾರೂ ಅಲ್ಲದ ರಕ್ತ ಸಂಬಂಧವೇ ಇಲ್ಲದ ಮಗುವಿಗಾಗಿ ಮಿಡಿದ ಜುಬೈರ್ ಅಂತಃಕರಣಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮಗು ಬದುಕಿ ಉಳಿದರೆ ಸಾಕಿತ್ತು ಅನ್ನುವುದೇ ಜುಬೈರ್ ಮನದಲ್ಲಿದ್ದ ಬಲವಾದ ಮನವಿಯಾಗಿತ್ತು.