ನ್ಯೂಸ್ ನಾಟೌಟ್ : ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾದ ವರಾಹ ರೂಪಂ ಹಾಡು ವಿವಾದಕ್ಕೆ ಸಿಲುಕಿತ್ತು. ಮಲಯಾಳಂ ತೈಕ್ಕುಡಂ ಬ್ರಿಡ್ಜ್ನವರು ತಮ್ಮ ನವರಸಂ ಹಾಡಿನ ಕೃತಿಚೌರ್ಯ ಮಾಡಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ‘ವರಾಹ ರೂಪಂ’ ಹಾಡಿಗೆ ಕೇರಳದ ಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ. ಈ ಮೂಲಕ ವರಾಹ ರೂಪಂ ಹಾಡನ್ನು ಇಂದಿನಿಂದ ಚಿತ್ರಮಂದಿರ, ಯೂಟ್ಯೂಬ್, ಒಟಿಟಿ ಸೇರಿದಂತೆ ಎಲ್ಲೆಡೆ ಲಭ್ಯವಿರಲಿದೆ. ಕೋರ್ಟ್ನಲ್ಲಿ ಕೇಸ್ ಗೆದ್ದಿರುವ ಕಾಂತಾರ ತಂಡ ಸಂತಸ ವ್ಯಕ್ತಪಡಿಸಿದೆ. ವರಾಹ ರೂಪಂ ಹಾಡು ಮತ್ತೆ ವಾಪಾಸ್ ಆಗಿರುವುದು ಅಭಿಮಾನಿಗಳಿಗೂ ಸಂಭ್ರಮದ ಕ್ಷಣವಾಗಿದೆ.
‘ವರಾಹ ರೂಪಂ …’ ಹಾಡನ್ನು ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್ ಫಾರ್ಮ್ಗಳಲ್ಲಿ ಒಪ್ಪಿಗೆ ಇಲ್ಲದೆ ಬಳಸಬಾರದು ಎಂದು ಕೇರಳದ ಕೋರ್ಟ್ ಆದೇಶ ಹೊರಡಿಸಿತ್ತು. ಇದಕ್ಕೆ ತಲೆ ಬಾಗಿದ್ದ ಚಿತ್ರತಂಡ, ‘ವರಾಹ ರೂಪಂ’ ಹಾಡನ್ನು ಚಿತ್ರಮಂದಿರ, ಯೂಟ್ಯೂಬ್ನ ಹೊಂಬಾಳೆ ಫಿಲಂಸ್ನ ಚಾನಲ್, ಮ್ಯೂಸಿಕ್ ಆ್ಯಪ್ಗಳಾದ ಸಾವನ್ ಸೇರಿದಂತೆ ಮುಂತಾದ ಕಡೆಗಳಿಂದ ಹಾಡನ್ನು ಡಿಲೀಟ್ ಮಾಡಲಾಗಿತ್ತು. ಒಟಿಟಿಯಲ್ಲಿ ‘ಕಾಂತಾರ’ ಚಿತ್ರ ಬಿಡುಗಡೆಯಾದಾಗಲೂ ಬೇರೆ ಟ್ಯೂನ್ ಬಳಸಲಾಗಿತ್ತು. ಇದೀಗ ತಡೆಯಾಜ್ಞೆ ತೆರವಾಗಿದ್ದು ಹಾಡನ್ನು ಪುನಃ ಒಟಿಟಿ, ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ವೇದಿಕೆಗಳಲ್ಲೂ ಮೂಲ ‘ವರಾಹ ರೂಪಂ’ ಹಾಡು ಸಿಗಲಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ ಸಂತಸ ಹಂಚಿಕೊಂಡಿದ್ದಾರೆ. ಕೋರ್ಟ್ ನ ಗೆಲುವು ದೈವಾನು ದೈವಗಳ ಆಶೀರ್ವಾದ ಎಂದು ರಿಷಬ್ ಹೇಳಿದ್ದಾರೆ.