ನ್ಯೂಸ್ ನಾಟೌಟ್: ನೀವು ಕೆನರಾ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದರೆ ನಿಮ್ಮ ಖಾತೆಯಿಂದ 147 .5ರೂ. ಕಡಿತವಾಗಿರಬಹುದು. ಏಕೆ ಕಡಿತ ಮಾಡಲಾಗಿದೆ? ಎಂಬ ಪ್ರಶ್ನೆ ಕೂಡ ನಿಮ್ಮನ್ನು ಕಾಡುತ್ತಿರಬಹುದು.
ನಿಮಗೆ ತಿಳಿದಿರುವಂತೆ ಎಲ್ಲ ಬ್ಯಾಂಕ್ ಗಳು ಡೆಬಿಟ್ ಕಾರ್ಡ್ ಬಳಕೆ ಮೇಲೆ ವಾರ್ಷಿಕ ನಿರ್ವಹಣಾ ಶುಲ್ಕವನ್ನು ವಿಧಿಸುತ್ತವೆ. ಈ ಶುಲ್ಕ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಾಗುತ್ತದೆ. ಕೆನರಾ ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಕ್ಲಾಸಿಕ್/ಸ್ಟ್ಯಾಂಡರ್ಡ್, ಪ್ಲಾಟಿನಂ, ಬ್ಯುಸಿನೆಸ್ ಹಾಗೂ ಇತರ ಆಯ್ದ ಡೆಬಿಟ್ ಕಾರ್ಡ್ ಗಳ ಮೇಲೆ ವಾರ್ಷಿಕ ನಿರ್ವಹಣಾ ಶುಲ್ಕ ವಿಧಿಸುತ್ತದೆ. ಇದೇ ಕಾರಣಕ್ಕೆ ನಿಮ್ಮ ಬ್ಯಾಂಕ್ ಖಾತೆಯಿಂದ ಇತ್ತೀಚೆಗೆ 147 .5 ರೂ. ಕಡಿತವಾಗಿದೆ. ಇನ್ನು ವಿವಿಧ ಮಾದರಿಯ ಡೆಬಿಟ್ ಕಾರ್ಡ್ಗಳ ಮೇಲೆ ವಾರ್ಷಿಕ ನಿರ್ವಹಣಾ ಶುಲ್ಕ ಕೂಡ ಭಿನ್ನವಾಗಿರುತ್ತದೆ. ಡೆಬಿಟ್ ಕಾರ್ಡ್ ಮೇಲಿನ ನೋಂದಣಿ ಶುಲ್ಕ ಹಾಗೂ ಆಕ್ಟಿವೇಷನ್ ಅಥವಾ ಸದಸ್ಯತ್ವ ಶುಲ್ಕ ಶೂನ್ಯವಾಗಿದ್ರೂ ವಾರ್ಷಿಕ ನಿರ್ವಹಣಾ ಶುಲ್ಕ ವಿಧಿಸಲಾಗುತ್ತದೆ. ಕ್ಲಾಸಿಕ್/ಸ್ಟ್ಯಾಂಡರ್ಡ್ ಡೆಬಿಟ್ ಕಾರ್ಡ್ ಶುಲ್ಕ 125 ರೂ., ಪ್ಲಾಟಿನಂ ಕಾರ್ಡ್ ಶುಲ್ಕ 350 ರೂ., ಬ್ಯುಸಿನೆಸ್ ಕಾರ್ಡ್ ಶುಲ್ಕ 300 ರೂ. ಹಾಗೂ ಇತರ ಆಯ್ದ ಕಾರ್ಡ್ ಮೇಲಿನ ಶುಲ್ಕ 1000 ರೂ. ಆಗಿದೆ.
ಇನ್ನು ಡೆಬಿಟ್ ಕಾರ್ಡ್ ಗಳ ಮೇಲಿನ ಸೇವಾ ಶುಲ್ಕದ ಮೇಲೆ ಶೇ.18ರಷ್ಟು ಜಿ ಎಸ್ ಟಿ ಕೂಡ ವಿಧಿಸಲಾಗುತ್ತದೆ. ಬ್ಯಾಂಕ್ ಸೇವಾ ಶುಲ್ಕದ ಮೇಲೆ ವಿಧಿಸಲಾಗುವ ಇತರ ತೆರಿಗೆಗಳನ್ನು ಕೂಡ ಗ್ರಾಹಕರಿಂದ ಪಡೆಯುತ್ತದೆ. ಹೀಗಾಗಿ ನೀವು ಕೆನರಾ ಬ್ಯಾಂಕ್ ಕ್ಲಾಸಿಕ್/ಸ್ಟ್ಯಾಂಡರ್ಡ್ ಡೆಬಿಟ್ ಕಾರ್ಡ್ ಹೊಂದಿದ್ರೆ ವಾರ್ಷಿಕ ನಿರ್ವಹಣಾ ಶುಲ್ಕ 125 ರೂ.+ಜಿಎಸ್ ಟಿ (22.5 ರೂ.) ಅಂದ್ರೆ 147.5ರೂ. ಪಾವತಿಸಬೇಕಾಗುತ್ತದೆ.