ನ್ಯೂಸ್ ನಾಟೌಟ್: ಕೊಯಿನಾಡು, ಕಲ್ಲುಗುಂಡಿ, ಗೂನಡ್ಕ, ಅರಂತೋಡು ಹಾಗೂ ಸುಳ್ಯದ ಜನತೆಯ ಪ್ರೀತಿಗೆ ಪಾತ್ರವಾಗಿದ್ದ ಬಬ್ರು ಬಸವ ಮೃತಪಟ್ಟಿದೆ. ಈ ಶಾಕಿಂಗ್ ನ್ಯೂಸ್ ಗುಂಗಿನಲ್ಲಿ ಇದೀಗ ಜನ ಸಿಲುಕಿಕೊಂಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಮನೆ ಮಠವಿಲ್ಲದೇ ಬಸ್ ಸ್ಟಾಂಡ್ ನಲ್ಲಿಯೋ ,ಮನೆ ಅಂಗಳದಲ್ಲಿಯೋ ಮಲಗಿ ನಿದ್ರಿಸುತ್ತಿದ್ದ ಬಬ್ರು ಕಲ್ಲುಗುಂಡಿ ಸಮೀಪದ ದಂಡೆಕಜೆಯ ಬರೆಯಿಂದ ಬಿದ್ದು ಬಲವಾದ ಏಟಿನಿಂದಾಗಿ ಅಸುನೀಗಿದೆ ಎಂದು ತಿಳಿದುಬಂದಿದೆ.
ಅರಂತೋಡು- ಕಲ್ಲುಗುಂಡಿ, ಸಂಪಾಜೆ, ಕೊಯಿನಾಡಿನ ಜನರಿಗೆ ಈ ಬಸವ ಹೆಚ್ಚು ಪರಿಚಿತ. ಕೆಲವೊಮ್ಮೆ ಸುಳ್ಯದ ತನಕ ಈ ಬಸವ ಹೋಗಿ ಅಲ್ಲಿನ ಜನರ ಜತೆಗೂ ಬೆರೆತದ್ದೂ ಇದೆ. ಅಂಗಡಿ ಬಳಿ ಹೋದರು ಏನನ್ನು ಮುಟ್ಟದೇ , ಯಾರಿಗೂ ತೊಂದರೆಯನ್ನು ಮಾಡದೇ ಅದರ ಪಾಡಿಗೆ ಅದು ಜೀವನ ಮಾಡುತ್ತಿತ್ತು. ಬೇರೆಲ್ಲ ಹೋರಿಗಳಿಗಿಂತ ವಿಭಿನ್ನವಾಗಿದ್ದ ಈತನನ್ನು ಕಂಡಾಗಲೆಲ್ಲ ಕೆಲವರು ಹಣೆಗೆ ಕುಂಕುಮ ಹಚ್ಚಿ ,ತಿನ್ನುವುದಕ್ಕು ಕೊಡುತ್ತಿದ್ದರು. ಕಟ್ಟುಮಸ್ತಾಗಿದ್ದ ಬಬ್ರುವಿನ ಗಂಭೀರ ನಡಿಗೆಯೇ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಸಾಧು ಸ್ವಭಾವದ ಈತ ಮಕ್ಕಳ ಫೇವರಿಟ್ ಕೂಡ.ಇದೀಗ ಇದರ ನಿಧನ ವಾರ್ತೆಯು ಅರಂತೋಡು- ಕಲ್ಲುಗುಂಡಿ-ಸಂಪಾಜೆಯ ಜನತೆಗೆ ಅತೀವ ನೋವನ್ನುಂಟು ಮಾಡಿದೆ.