ನ್ಯೂಸ್ ನಾಟೌಟ್ : ಕೇರಳ ಲಾಟರಿ 25 ಕೋಟಿ ಗೆದ್ದು ಭಾರಿ ಸುದ್ದಿಯಾಗಿದ್ದ ಆಟೋ ಚಾಲಕ ಈಗ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಕುಂತರೆ ಕೂರಂಗಿಲ್ಲ ನಿಂತರೆ ನಿಲ್ಲಂಗಿಲ್ಲ ಅನ್ನುವ ಹಾಗೆ ಆಗಿದೆ ಅವರ ಪರಿಸ್ಥಿತಿ. ಕೋಟಿ ಗೆದ್ದ ಸುದ್ದಿ ಹರಿದಾಡುತ್ತಿದ್ದಂತೆ ದೂರದ ಊರಿನ ನೆಂಟರೆಲ್ಲ ಕರೆ ಮಾಡಲು ಆರಂಭಿಸಿದ್ದಾರೆ. ಇಷ್ಟರ ತನಕ ಮುಖ ನೋಡದವರೆಲ್ಲ ನನ್ನ ಸಂಬಂಧಿ ಅಂತ ಮನೆ ಹತ್ತಿರ ಬರುತ್ತಿದ್ದಾರೆ. ಅಣ್ಣಾ ಸ್ವಲ್ಪ ದುಡ್ಡು ಇದ್ರೆ ಕೊಡು ಅಂತ ಫೋನ್ ಮಾಡಿ ಪ್ರಾಣ ತಿನ್ನುತ್ತಿದ್ದಾರೆ. ಇದೆಲ್ಲದರಿಂದಾಗಿ ಯಾಕಾದರೂ ಕೋಟಿ ಗೆದ್ದೆ ನಾನು ಅನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋ ಚಾಲಕ ಈಗ ಕದ್ದು ಮುಚ್ಚಿ ಓಡಾಡುತ್ತಿದ್ದಾರೆ. ಅಯ್ಯೋ ನನಗೆ ದುಡ್ಡು ಇನ್ನೂ ಕೈಗೆ ಬಂದಿಲ್ಲ. ನನ್ನ ಬಿಟ್ಟು ಬಿಡಿ ಎಂದು ಕಣ್ಣೀರು ಹಾಕಿಕೊಂಡು ಅಂಗಲಾಚುತ್ತಿದ್ದಾರೆ.
ಸ್ವತಃ ಅನೂಪ್ ಅವರೇ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರ ಹಾಕಿದ್ದಾರೆ. ಜನರಿಂದ ತಪ್ಪಿಸಿಕೊಳ್ಳೋದೇ ಅನೂಪ್ ಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ‘ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ನನ್ನ ಮಗನಿಗೆ ಹುಷಾರಿಲ್ಲ. ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೂ ಆಗುತ್ತಿಲ್ಲ. ಜನರಿಂದ ತಪ್ಪಿಸಿಕೊಂಡು ಕಳ್ಳನಂತೆ ಓಡಾಡುತ್ತಿದ್ದೇನೆ. ಇದೆಲ್ಲಾ ಬೇಕಾ ಅಂತಾ ಅನ್ನಿಸ್ತಿದೆ ಎಂದು ಅನೂಪ್ ಹೇಳಿದ್ದಾರೆ.
ಅನೂಪ್ ಲಾಟರಿ ಗೆದ್ದ ವಿಚಾರ ತಿಳಿಯುತ್ತಿದ್ದಂತೆ ಮನೆ ಬಳಿ ದುಡ್ಡಿನ ಸಹಾಯ ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ ಅಂತ. ದುಡ್ಡು ನನ್ನ ಕೈ ಸೇರಿಲ್ಲ ಅಂದ್ರೂ ಜನ ನಂಬುತ್ತಿಲ್ಲ. ಪದೇ ಪದೇ ಬಂದು ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಬೇಸತ್ತಿರುವ ಅನೂಪ್ ಅವರು ಮನೆಯಿಂದ ಓಡಿಹೋಗಿದ್ದಾರೆ. ತಮ್ಮ ಸಹೋದರಿಯ ಮನೆಯಲ್ಲಿ, ಸ್ನೇಹಿತರ ಮನೆಯಲ್ಲಿ ಉಳಿಯುತ್ತಿದ್ದಾರೆ.