ನ್ಯೂಸ್ ನಾಟೌಟ್: ಬೆಂಗಳೂರು: ಮುಜರಾಯಿ ಇಲಾಖೆ ಇ-ಪ್ರಸಾದ ಯೋಜನೆಯಲ್ಲಿ ಹೆಚ್ಚಿನ ಅನುಕೂಲಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಪ್ರಸಾದ ಸೇವೆ ಮೂಲಕ ರಾಜ್ಯದ 400 ದೇಗುಲಗಳ ಪ್ರಸಾದ 15 ದಿನಗಳಲ್ಲಿ ಮನೆ ಬಾಗಿಲಿಗೆ ಬರುವಂತೆ ಮಾಡಲಾಗುವುದು ಎನ್ನಲಾಗಿದೆ.
ಈಗಾಗಲೇ ಧನುರ್ಮಾಸ ಮುಗಿದಿದ್ದು, ಗೃಹಪ್ರವೇಶ, ನಾಮಕರಣ ಸೇರಿದಂತೆ ಮದುವೆ ಸೀಜನ್ ಆರಂಭವಾಗಿದೆ. ಇಂತಹ ಶುಭ ಸಂದರ್ಭದಲ್ಲಿ ದೂರದ ಊರುಗಳಲ್ಲಿರುವ ದೇವಸ್ಥಾನಕ್ಕೆ ಹೋಗಿ ಪ್ರಸಾದ ತರುವುದು ಕಷ್ಟವಾಗುತ್ತದೆ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಮುಜರಾಯಿ ಸಿಹಿ ಸುದ್ದಿ ನೀಡಿದ್ದು, ಮನೆ ಬಾಗಿಲಿಗೆ ದೇವರ ಪ್ರಸಾದ ತಲುಪಲಿದೆ.
ಈ ಮೂಲಕ ರಾಜ್ಯದ ಪ್ರಮುಖ 10 ದೇವಾಲಯಗಳ ಪ್ರಸಾದ ಆನ್‌ಲೈನ್‌ನಲ್ಲಿ ಮನೆ ಬಾಗಿಲಿಗೆ ತಲುಪಿಸುವ ಪ್ರಯೋಗ ಆರಂಭಿಸಿತ್ತು. ಈ ಇ-ಪ್ರಸಾದ ಸೇವೆಗೆ ಭಕ್ತಾದಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಎನ್ನಲಾಗಿದೆ.
ಇದುವರೆಗೂ ಅಂದಾಜು 25 ಸಾವಿರ ಭಕ್ತಾದಿಗಳು ಇ-ಪ್ರಸಾದ ಪಡೆದಿದ್ದಾರೆ. ಹೀಗಾಗಿ ಮುಂದಿನ 15 ದಿನಗಳಲ್ಲಿ ರಾಜ್ಯದ 400 ದೇವಾಲಯಗಳಲ್ಲಿ ಇ-ಪ್ರಸಾದ ಸೇವೆ ಆರಂಭಿಸುವ ಯೋಜನೆಯನ್ನು ಮುಜರಾಯಿ ಇಲಾಖೆ ಹಾಕಿಕೊಂಡಿದೆ ಎಂದು ವರದಿ ತಿಳಿಸಿದೆ.